ವಾಸುದೇವ
	152-77. ಕುಷಾಣರ ಕೊನೆಯ ದೊರೆ ಹಾಗೂ ಎರಡನೆಯ ಕನಿಷ್ಕನ ಮಗ. ಇವನು ಹುವಿಷ್ಕನ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ. ಇವನ ಶಾಸನಗಳು ಮಥುರಾದಲ್ಲಿ ದೊರೆತಿವೆ. ಇವನ ಕಾಲದ ನಾಣ್ಯಗಳಲ್ಲಿ ಶಿವನ ಲಾಂಛನವಿದೆ. ಇವನ ಆಡಳಿತಾವಧಿಯಲ್ಲಿ ಸ್ಥಳೀಯ ಮುಖ್ಯಸ್ಥರು ದಂಗೆ ಎದ್ದಿದ್ದರಿಂದ ಕುಷಾಣ ಪ್ರಭುತ್ವ ಉತ್ತರ ಹಾಗೂ ವಾಯವ್ಯ ಭಾರತದಲ್ಲಿ ಕ್ಷೀಣಿಸಲಾರಂಭಿಸಿತು. ಇವನ ಆಳಿಕೆಯ ವೇಳೆಗೆ ಕುಷಾಣರ ಪ್ರಭುತ್ವ ಮಥುರಾಕ್ಕೆ ಸೀಮಿತವಾಗಿತ್ತು. ಆದ ಕಾರಣ ಇವನು ತನ್ನ ರಾಜಧಾನಿಯನ್ನು ಬಹುಶಃ ಪುರುಷಪುರದಿಂದ ಮಥುರಾಕ್ಕೆ ವರ್ಗಾಯಿಸಿದ. ಭಾರತದಲ್ಲಿ ನೆಲೆಸಿದ ವಿದೇಶೀಯರು ಹಿಂದು ಧರ್ಮ, ಸಂಸ್ಕøತಿಗಳ ಪ್ರಭಾವದಿಂದ ಹೇಗೆ ಭಾರತೀಯರಾದರೆಂಬುದನ್ನು ಇವನಿಟ್ಟುಕೊಂಡಿರುವ ವಾಸುದೇವ ಎಂಬ ಹೆಸರೇ ಸೂಚಿಸುತ್ತದೆ. ಇವನ ಕಾಲದಲ್ಲಿ ಸಂಸ್ಕøತ ಭಾಷೆಗೆ ಹೆಚ್ಚು ಪ್ರಾಧಾನ್ಯ ದೊರಕಿತ್ತೆಂಬುದೂ ಭಾರತದಲ್ಲಿ ಹುಟ್ಟಿದ ಬೌದ್ಧಧರ್ಮ ಮಧ್ಯ ಏಷ್ಯದವರೆಗೆ ಹಬ್ಬಿತ್ತೆಂಬುದೂ ಇವನ ಕಾಲದ ಶಾಸನಗಳ ಅಧ್ಯಯನದಿಂದ ವ್ಯಕ್ತವಾಗುತ್ತವೆ. ವಾಸುದೇವ ಎಂಬ ಹೆಸರಿನಿಂದ ಇವನು ವೈಷ್ಣವ ಧರ್ಮಾನುಯಾಯಿ ಯಾದನೆಂದು ಕಂಡುಬಂದರೂ ಇವನ ನಾಣ್ಯಗಳಲ್ಲಿ ಕಂಡುಬರುವ ಶಿವನಂದಿ ಮೊದಲಾದ ಚಿತ್ರಗಳಿಂದ ಈತ ಶೈವಮತಾವಲಂಬಿ ಯಾಗಿದ್ದನೆಂದು ತೋರುತ್ತದೆ. ಇವನ ಕಾಲದಲ್ಲಿ ಮಥುರಾವಾಸ್ತುಶಿಲ್ಪ ಅತ್ಯಂತ ಉನ್ನತಮಟ್ಟಕ್ಕೇರಿತು. ಇವನು ವಿದ್ವಾಂಸರಿಗೆ ಆಶ್ರಯದಾತನಾಗಿದ್ದ.

	ಇವನ ಅನಂತರ 3ನೆಯ ಕನಿಷ್ಕ(180-210), ಎರಡನೆಯ ವಾಸುದೇವ(210-30) (ಚೀನ ದೇಶಕ್ಕೆ ರಾಯಭಾರಿಯನ್ನು ಕಳಿಸಿಕೊಟ್ಟ ನೆಂದು ಹೇಳಲಾದ ಕುಷಾಣ ಅರಸು ಪೋ-ಶಿಯೋ ಎಂಬುವವನು ಇವನೆಂದು ಹೇಳಲಾಗಿದೆ) ಮತ್ತು ಮೂರನೆಯ ವಾಸುದೇವ ಕುಷಾಣ ದೊರೆಗಳಾಗಿದ್ದರೂ ರಾಜ್ಯದ ಉತ್ಕರ್ಷಕ್ಕೆ ಶ್ರಮಿಸುವಷ್ಟು ಪ್ರಬಲರಾಗಿರಲಿಲ್ಲ. ಇವರ ಆಡಳಿತಾವಧಿಯಲ್ಲಿ ನಾಗಾ, ಯೌಧೇಯ, ಮಾಳ್ವ ಮುಂತಾದ ಸಣ್ಣಪುಟ್ಟ ಸಂಸ್ಥಾನಗಳು ಕಾಣಿಸಿಕೊಳ್ಳಲಾರಂಭಿಸಿದಂತೆ ಕುಷಾಣ ಅಸ್ತಿತ್ವ ಕೊನೆಗೊಂಡಿತು.								
		(ಕೆ.ವಿ.ಎಸ್.ಯು.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ